ವಾಷಿಂಗ್‍ಟನ್, ಬೂಕರ್
	1858-1915. ಅಮೆರಿಕದ ಪ್ರಸಿದ್ಧ ನೀಗ್ರೊ ಶಿಕ್ಷಣ ತಜ್ಞ. ಇವನು ವರ್ಜೀನಿಯ ತೊಟದ ಕಾರ್ಮಿಕನ ಮಗನಾಗಿ 1858ರಲ್ಲಿ ಜನಿಸಿದ. ಯಾದವೀಕಲಹದಿಂದಾಗಿ ಗುಲಾಮಗಿರಿ ಯಿಂದ ಮುಕ್ತನಾದ ಅನಂತರ ಹಗಲಿನಲ್ಲಿ ಕಾರ್ಖಾನೆ ಯಲ್ಲಿ ದುಡಿಯುತ್ತ, ರಾತ್ರಿ ಹ್ಯೂಂಪ್ಟನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ. ಮೂರು ವರ್ಷ ಅಧ್ಯಾಪನ ಮತ್ತು ಕೃಷಿಯಲ್ಲಿ ಉನ್ನತ ಶಿಕ್ಷಣ ಪಡೆದ. ಅನಂತರ ರಾತ್ರಿ ಶಾಲೆಯಲ್ಲಿ ಬೋಧಿಸಿ ಕಾರ್ಮಿಕ ಜ್ಞಾನ ಹೆಚ್ಚಿಸಿದ. ಭಾರತೀಯ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ ಕೆಲಸವನ್ನು ನಿರ್ವಹಿಸಿದ. ಅನಂತರ ಜನರಲ್ ಆರ್ಮ್‍ಸ್ಟ್ರಾಂಗ್‍ನ ಪ್ರೋತ್ಸಾಹದಿಂದ 1881ರಲ್ಲಿ ಅಲಬಾಮ ರಾಜ್ಯದ ಟಸ್ಕಿಗೀ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ಇವನ ಆ ಕಾಲೇಜಿನ ಅಭಿವೃದ್ಧಿಗಾಗಿ ಸು. 20 ವರ್ಷಗಳಿಗೂ ಹೆಚ್ಚು ಕಾಲ ಸತತವಾಗಿ ಶ್ರಮಿಸಿ ಅದನ್ನು ಒಂದು ಉನ್ನತ ಶಿಕ್ಷಣಕೇಂದ್ರವನ್ನಾಗಿ ಮಾಡಿದ. ಇದು ಜಗತ್ತಿನ ಪ್ರಮುಖ ಔದ್ಯೋಗಿಕ ಹಾಗೂ ಅಧ್ಯಾಪನ ಕೇಂದ್ರವಾಗಿ ಬೆಳೆಯಿತು. ಇವನು 1915 ನವೆಂಬರ್ 14ರಂದು ನಿಧನ ಹೊಂದಿದ.		
(ಎಮ್.ಜೆ.ಬಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ